ಡೆ ಲ ಮೇರ್, ವಾಲ್ಟರ್ ಜಾನ್, ಓ ಎಮ್
ಆಂಗ್ಲಕವಿ ಮತ್ತು ಕಾದಂಬರಿಕಾರ. ಹುಟ್ಟಿದ್ದು ಕೆಂಟ್‍ನ ಬೌರಲ್‍ಟನ್‍ನಲ್ಲಿ. ತಾಯಿಯ ಕಡೆಯಿಂದ ಕವಿ ರಾಬರ್ಟ್ ಬ್ರೌನಿಂಗನ ಸಂಬಂಧಿ. ಸೇಂಟ್ ಪಾಲ್ಸ್ ಕೆತೆಡ್ರಲ್ ಕ್ಲೈರ್ ಶಾಲೆಯಲ್ಲಿ ಓದುತ್ತಿದ್ದಾಗ ದಿ ಕಾರಿಸ್ಟರ್ಸ್ ಜನರಲ್ ಎಂಬ ಶಾಲಾ ಪತ್ರಿಕೆಯನ್ನು ಪ್ರಾರಂಭಿಸಿದ. 1890ರಲ್ಲಿ ಆಂಗ್ಲೊ-ಅಮೆರಿಕನ್ ಆಯಿಲ್ ಕಂಪನಿಯ ಕಚೇರಿಯಲ್ಲಿ ಗುಮಾಸ್ತನಾಗಿ ಸೇರಿಕೊಂಡು ಅಲ್ಲಿ ಸುಮಾರು 18 ವರ್ಷ ಕೆಲಸಮಾಡಿದ. ಬಿಡುವಿನ ವೇಳೆಯಲ್ಲಿ ಸಾಹಿತ್ಯ ಸೃಷ್ಟಿಯಲ್ಲಿ ನಿರತನಾದ. ದಿ ಸ್ಕೆಚ್ ಪತ್ರಿಕೆಯಲ್ಲಿ 1895ರಲ್ಲಿ ಪ್ರಕಟಗೊಂಡ ಕಿಸ್ಮತ್ ಎಂಬ ಸಣ್ಣಕತೆ ಈತನ ಪ್ರಥಮ ಸಾಹಿತ್ಯಕೃತಿ. ಅನಂತರ ಈತನ ಲೇಖನಗಳು ಕಾರ್ನ್‍ಹಿಲ್ ಮ್ಯಾಗಜೀನ್‍ನಲ್ಲಿ ಪ್ರಕಟವಾದವು. ಈತನ ಸಾಂಗ್ಸ್ ಆಫ್ ಚೈಲ್ಡ್‍ಹುಡ್ ಎಂಬ ಪ್ರಥಮ ಕವನ ಸಂಕಲನ (1902) ಹಾಗೂ ಇತರ ಪ್ರಾರಂಭದ ಸಾಹಿತ್ಯಕೃತಿಗಳೂ ವಾಲ್ಟರ್ ರಾಮಲ್ ಎಂಬ ಗುಪ್ತನಾಮದಲ್ಲಿ ಪ್ರಕಟಗೊಂಡವು. 1904ರಲ್ಲಿ ಹೆನ್ರಿ ಬ್ರಾಕೆನ್ ಎಂಬ ಕಾದಂಬರಿ ಪ್ರಕಟಗೊಂಡಿತು. ಮಂತ್ಲಿ ರಿವ್ಯೂ ಎಂಬ ಪತ್ರಿಕೆಯಲ್ಲಿ ಈತನ ಕವಿತೆಗಳನ್ನು ಪ್ರಕಟಿಸಿದ ಹೆನ್ರಿ ನ್ಯೂಬೋಲ್ಡ್‍ನ ಸಲಹೆಯಿಂದ ಈತನಿಗೆ ಸರ್ಕಾರದಿಂದ ನೂರುಪೌಂಡುಗಳ ಗೌರವಧನ ದೊರಕುವಂತಾಯಿತು (1908). ಅದರಿಂದಾಗಿ ನೌಕರಿ ಬಿಟ್ಟು ಸಾಹಿತ್ಯ ಚಟುವಟಿಕೆಗಳಲ್ಲಿಯೇ ತನ್ನ ಪೂರ್ಣಸಮಯವನ್ನು ಕಳೆಯತೊಡಗಿದ. ದಿ ತ್ರೀ ಮುಲ್ಲಾ-ಮುಲ್ಗಾರ್ಸ್ ಮತ್ತು ದಿ ರಿಟರ್ನ್ ಎಂಬ ಕಾದಂಬರಿಗಳು 1910ರಲ್ಲಿ ಪ್ರಕಟಗೊಂಡವು. ಎರಡನೆಯದು ಪಾಲಿಗ್‍ನಾಕ್ ಬಹುಮಾನ ಗಳಿಸಿತು. ಈತನ ಶ್ರೇಷ್ಠ ಕಾದಂಬರಿ ಮೆಮಾಯರ್ಸ್ ಆಫ್ ಎ ಮಿಜಿಟ್ (1921). 1922ರ ಟೇಟ್ ಬ್ಲ್ಯಾಕ್ ಮೆಮೊರಿಯಲ್ ಪಾರಿತೋಷಿಕ ಪಡೆಯಿತು. ಈತ ಸುಮಾರು 20 ಕವನ ಸಂಕಲನಗಳನ್ನೂ ಅಷ್ಟೇ ಸಂಖ್ಯೆಯ ಬೇರೆ ಬೇರೆ ಬಗೆಯ ಗದ್ಯಕೃತಿಗಳನ್ನೂ ರಚಿಸಿದ್ದಾನೆ. ದಿ ಲಿಸ್ನರ್ಸ್ ಅಂಡ್ ಅದರ್ ಪೋಯೆಮ್ಸ್ (1912) ಎಂಬ ಕೃತಿ ಈತ ನಾಜೂಕಾದ ಕಾಲ್ಪನಿಕ ಕಾವ್ಯದ ಲೇಖಕನೆಂಬ ಪ್ರಸಿದ್ಧಿಯನ್ನು ಸ್ಥಾಪಿಸಿತು. ಪೀಕಾಕ್ ಪೈ (1913), ಮಾಟ್ಲಿ (1918), ಡಾನ್-ಎ ಡೌನ್-ಡೆರಿ (1922), ದಿ ಫ್ಲೀಟಿಂಗ್ (1933) ರ್ಹೈಮ್ ಅಂಡ್ ವರ್ಸಸ್ (1944) - ಇವು ಈತನ ಪ್ರಸಿದ್ಧ ಕವನ ಸಂಕಲನಗಳು. ಓ ಲವ್ಲಿ ಇಂಗ್ಲೆಂಡ್ ಎಂಬ ಕೃತಿ 1954ರಲ್ಲಿ ಫಾಯ್ಲ್ ಪೊಯಿಟ್ರಿ ಬಹುಮಾನವನ್ನು ತಂದಿತು. ಕಲೆಕ್ಟೆಡ್ ಸ್ಟೋರೀಸ್ ಫಾರ್ ಚಿಲ್ಡ್ರನ್ (1944); ಕಲೆಕ್ಟೆಡ್ ಟೇಲ್ಸ್ (1950); ಕಾಸಿಂಗ್ಸ್ (1921); ದಿ ಟ್ರ್ಯಾವಲರ್ (1946); ಇನ್‍ವರ್ಡ್ ಕಂಪ್ಯಾನಿಯನ್ (1950); ವಿಂಗ್ಡ್ ಚಾರಿಯೆಟ್ ಅಂಡ್ ಅದರ್ ಪೊಯೆಮ್ಸ್ (1951); ಮತ್ತು ಪ್ರೈವೇಟ್ ವ್ಯೂ- ಇವು ಈತನ ಇತರ ಕೃತಿಗಳು. ಈತನಿಗೆ 1948ರಲ್ಲಿ ಕಂಪ್ಯಾನಿಯನ್ ಆಫ್ ಆನರ್ ಪದವಿಯನ್ನೂ 1953ರಲ್ಲಿ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನೂ ನೀಡಲಾಯಿತು. ಅಲ್ಲದೆ ಅನೇಕ ವಿಶ್ವವಿದ್ಯಾನಿಲಯಗಳು ಗೌರವ ಪದವಿಗಳನ್ನು ನೀಡಿದವು. ಈತನಿಗೆ ಕಾಲ್ಪನಿಕ ಜಗತ್ತನ್ನು ಸೃಷ್ಟಿಸಿ ಮಕ್ಕಳನ್ನು ರಮಿಸುವ ಅಸಾಧಾರಣ ಕಲ್ಪನಾ ಶಕ್ತಿಯಿದ್ದಿತು. ಈತನ ಹೆಚ್ಚು ಗಮನಾರ್ಹವಾದ ಕೃತಿಗಳು ಆಧುನಿಕ ಸಾಹಿತಿಗಳು ಬರೆಯಲು ಹಿಂಜರಿಯುವ ಯಕ್ಷಿಣಿಯ ಕತೆಗಳಾಗಿದ್ದರೂ ಅವು ಉತ್ತಮ ದರ್ಜೆಯವಾಗಿದ್ದು, ಉತ್ಕøಷ್ಟಮಟ್ಟದ್ದೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ